ಸುಣ್ಣಕಲ್ಲು
	ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಕಾರ್ಬೊನೇಟ್‍ಗಳಿಂದ ರೂಪಗೊಂಡ ಜಲಜಶಿಲೆ (ಲೈಮ್‍ಸ್ಟೋನ್). ಇದರಲ್ಲಿ ಕ್ಯಾಲ್ಸೈಟ್ ಖನಿಜ ಪ್ರಧಾನವಾಗಿರುತ್ತದೆ. ಸುಣ್ಣ, ಶಿಲೆಯ ರಾಸಾಯನಿಕ ಸಂಯೋಜನೆ ಬಲುಮಟ್ಟಿಗೆ ಕ್ಯಾಲ್ಸಿಯಮ್ ಆಕ್ಸೈಡ್ ಮತ್ತು ಕಾರ್ಬನ್‍ಡೈಆಕ್ಸೈಡ್‍ಗಳಿಂದಾಗಿದೆ. ಆದರೆ ವಿನ್ಯಾಸಗಳು ಮಾತ್ರ ವೈವಿಧ್ಯಮಯ. ಏಕೆಂದರೆ ಅವು ರೂಪುಗೊಳ್ಳುವ ಬಗೆಗಳು ವಿವಿಧ. ಪ್ರಪಂಚಾದ್ಯಂತ ಸುಣ್ಣಶಿಲೆಗಳಲ್ಲಿ ದೊರೆತಿರುವ ಜೀವ್ಯವಶೇಷಗಳಿಂದ ಭೂಮಿಯಲ್ಲಿ ಜೀವಿಗಳು ವಿಕಾಸಗೊಂಡ ರೀತಿಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯಲು ಸಾಧ್ಯವಾಗಿದೆ.

	ಸುಣ್ಣಶಿಲಾ ಪ್ರದೇಶಗಳ ದಪ್ಪ ನಾನಾ ಕಡೆ ಕೆಲವು ಸೆಂಮೀಗಳಿಂದ ನೂರಾರು ಮೀಟರುಗಳವರೆಗೆ ಇರುವುದು. ಕಾರ್ಬನ್‍ಡೈಆಕ್ಸೈಡ್‍ನಿಂದ ಕೂಡಿದ ನೀರು ಮತ್ತು ಸುಣ್ಣಶಿಲೆಯ ಪ್ರಧಾನ ಅಂಶವಾದ ಕ್ಯಾಲ್ಸಿಯಮ್ ಕಾರ್ಬೊನೇಟ್‍ಗಳ ನಡುವೆ ಸಂಭವಿಸುವ ರಾಸಾಯನಿಕ ಕ್ರಿಯೆಯಿಂದ ರೂಪುಗೊಳ್ಳುವ ಕ್ಯಾಲ್ಸಿಯಮ್‍ಬೈಕಾರ್ಬೊನೇಟ್ ಸುಲಭವಾಗಿ ನೀರಿನಲ್ಲಿ ಲೀನಿಸಿ ಹೋಗುತ್ತದೆ. ಆದ್ದರಿಂದ ತೇವಭರಿತ ವಾಯುಗುಣವಿರುವ ಪ್ರದೇಶಗಳಲ್ಲಿಯ ಸುಣ್ಣಶಿಲೆಗಳು ತೀರ ದುರ್ಬಲವಾಗಿರುತ್ತವೆ.

	ಸುಣ್ಣಶಿಲೆಗಳು ವ್ಯಾಪಿಸಿರುವ ಪ್ರದೇಶದಲ್ಲಿ ಅಂತರ್ಜಲ ಸ್ರವಿಸಿದಾಗ ಗುಹೆಗಳು ರೂಪುಗೊಳ್ಳುತ್ತವೆ. ಯುಗೋಸ್ಲಾವಿಯದ ಕಾಸ್ರ್ಟ್ ಪ್ರದೇಶದಲ್ಲಿ ಸುಣ್ಣಶಿಲಾ ಪ್ರದೇಶಗಳು ಮಡಿಚಿಕೊಂಡಿವೆ. ಆದ್ದರಿಂದ ಅಲ್ಲಿಯ ಗುಹೆಗಳು ನಾನಾ ಆಕಾರಗಳಲ್ಲಿವೆ. ಎಂದೇ ಇತರೆಡೆಗಳಲ್ಲಿಯ ಸದೃಶ ರಚನೆಗಳಿರುವ ಮಣ್ಣುಶಿಲಾ ಪ್ರದೇಶಗಳಿಗೆ ಕಾಸ್ರ್ಟ್ ಭೂಸ್ವರೂಪ ಎಂಬ ಹೆಸರೇ ಬಂದಿದೆ.

	ಕಾಸ್ರ್ಟ್ ಭೂಸ್ವರೂಪಗಳಿರುವ ಪ್ರದೇಶಗಳಲ್ಲಿ ಇಂಗಾಲದ ಡೈಆಕ್ಸೈಡ್ ಇರುವ ಮಳೆ ನೀರಿನಲ್ಲಿ ಕ್ಯಾಲ್ಸಿಯಮ್ ಕಾರ್ಬೊನೇಟ್ ಲೀನಿಸಿದಾಗ ಸುಣ್ಣಶಿಲೆಯ ಭಾಗಗಳು ಸವೆದು ಹಲವು ರೀತಿಯ ರಚನೆಗಳುಂಟಾಗುತ್ತವೆ:  ಅವು ಲೇಪೀಜ್, ನುಂಗುಬಿಲ, ಡೊಲೈನ್, ಪೋನಾರ್, ಯುನಾಲ, ಪೋಲ್ಜೆ, ನೆಲಗವಿ, ಸ್ವಾಭಾವಿಕ ಸೇತುವೆ ಮತ್ತು ಶುಷ್ಕ ಕಣಿವೆ.

	ಸುಣ್ಣಕಲ್ಲು ಪ್ರದೇಶದಲ್ಲಿ ರಾಸಾಯನಿಕ ಕ್ರಿಯೆಯಿಂದಾಗುವ ಸವೆತದಿಂದ, ಏರು ತಗ್ಗಿನಿಂದ ಕೂಡಿದ ಶಿಲಾಮಯ ಭಾಗ ಉಂಟಾಗುತ್ತದೆ. ಇಂಥ ಕಡೆಗಳಲ್ಲಿ ಕಂಡುಬರುವ ಮೊನಚಾದ ಶಿಲೆಗಳಿಗೆ ಲೇಪೀಜ್ ಎಂದು ಹೆಸರು. ಲೇಪೀಜ್‍ಗಳು ದೊಡ್ಡದಾಗುತ್ತ ಹೋದಂತೆ ಆಲಿಕೆಯಾಕಾರದ ಬಿಲಗಳು ರೂಪುಗೊಳ್ಳುತ್ತವೆ. ಆ ಪ್ರದೇಶದಲ್ಲಿ ತೊರೆಗಳು ನೆಲದೊಳಗೆ ಅಂತರ್ಗತವಾಗಿ ಹರಿಯುತ್ತವೆ. ಇವೇ ನುಂಗುಬಿಲಗಳು. ಇವು ಅಗಲವಾಗುತ್ತ ತಟ್ಟೆಯಾಕಾರದ ತಟ್ಟೆಗಳಾಗುತ್ತವೆ. ಇವು ಡೂಲೈನ್‍ಗಳು, ಅಂತರ್ಜಲ ಸ್ರವಿಸಿದಾಗ ಸುಣ್ಣಕಲ್ಲಿನ ಭಾಗಗಳು ಲೀನಿಸಿ ಆಳ ಹಾಗೂ ಲಂಬ ನಾಳಗಳು ರೂಪುಗೊಳ್ಳುತ್ತವೆ. ಇವು ಪೋನಾರ್‍ಗಳು. ಸುಣ್ಣಕಲ್ಲು ಪ್ರದೇಶದಲ್ಲಿ ಅಂತರ್ಜಲ ಸ್ರವಿಸಿದಾಗ ಉಂಟಾಗುವ ಕುಳಿಗಳು ಅಥವಾ ಕುಳಿಗಳ ಶ್ರೇಣಿಯೇ ನೆಲಗವಿ. ಇನ್ನು ಇಲ್ಲಿ  ಅಧಿಕ ಮಳೆ ಬಿದ್ದಾಗ ತಾತ್ಕಾಲಿಕ ಝರಿಗಳು ಹುಟ್ಟಿಕೊಳ್ಳುತ್ತವೆ. ಅವು ಹರಿಯಲು ಆ ಪ್ರದೇಶದಲ್ಲಿ ಕಣಿವೆಗಳು ಉಂಟಾಗುತ್ತವೆ. ಸ್ವಲ್ಪ ಕಾಲಾನಂತರ ಇವು ಒಣಗಿಹೋದಾಗ ಉಳಿಯುವ ಪಾತ್ರಗಳು ಶುಷ್ಕ ಕಣಿವೆಗಳು.

	ಸುಣ್ಣಶಿಲಾ ಪ್ರದೇಶದಲ್ಲಿ ಸ್ರವಿಸುವ ಅಂತರ್ಜಲದಲ್ಲಿ ಲೀನಿಸಿದ ಪದಾರ್ಥಗಳು, ನೀರಿನ ಅಂಶ ಆವಿಯಾದಂತೆ ಸಂಚಯನಗೊಳ್ಳುತ್ತವೆ. ಈ ಕ್ರಿಯೆಯಿಂದಲೂ ಸುಣ್ಣ ಕಲ್ಲಿನ ಪ್ರದೇಶದಲ್ಲಿ ವಿವಿಧ ತೆರನ ರಚನೆಗಳು ಉಂಟಾಗುತ್ತವೆ: ತೂಗುತೇಂಗಲು(ಸ್ಟ್ಯಾಲಕ್ಟೈಟ್), ನೆಲತೇಂಗಲು(ಸ್ಟ್ಯಾಲಗ್ಮೈಟ್).

	ಸುಣ್ಣಶಿಲೆ ಲೀನಿಸಿದ ನೀರು ಗುಹೆಯ ಮೇಲ್ಛಾವಣಿಯಿಂದ ಹನಿಹನಿಯಾಗಿ ತೊಟ್ಟಿಕ್ಕುತ್ತದೆ. ಹೀಗೆ ತೊಟ್ಟಿಕ್ಕಿದ ನೀರು ಆವಿಯಾದ ಮೇಲೆ ಸುಣ್ಣಶಿಲೆಗಳು ಶಂಖಾಕಾರದಲ್ಲಿ ಗಟ್ಟಿಯಾಗುತ್ತವೆ. ಇವುಗಳಿಗೆ ಇಳಿಶಂಖು ಎನ್ನುತ್ತಾರೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
(ಸಿ.ಎಮ್.)